ಮಳೆಯಲಿ... ಜೊತೆಯಲಿ...
ಅಂದು ಅವಳೊಂದಿಗೆ.. ಇಂದು ಅವಳ ನೆನಪಿನೊಂದಿಗೆ..
Written On: Feb-14, 2016
ಮಲೆನಾಡಿನ ಮಡಿಲ್ಲಲಿರುವ ಒಂದು ಊರು. ಮಳೆಗಾಲದ ಸಮಯ. ತಿಂಗಳಿನಿಂದ ಸುರಿಯುತ್ತಿದ್ದ ಕುಂಭಧ್ರೋಣ ಮಳೆ ನಾಲ್ಕೈದು ದಿನಗಳಿಂದ ಸ್ವಲ್ಪ ಕಡಿಮೆಯಾಗಿತ್ತು. ಆದರೂ ಮೋಡಗಳು ಮಾತ್ರ ಆಗಸದಲ್ಲಿ ಈಜಾಡಿಕೊಂಡೇ ಇದ್ದವು. ಸಂಜೆ ನಾಲ್ಕಕ್ಕೇ ಆರು ಗಂಟೆಯಾದಂತೆ ತೋರುತ್ತಿತ್ತು.
ಅವನು ಮನೆಯಿಂದ ಹೊರಬಂದು ಆಕಾಶದೆಡೆಗೆ ದಿಟ್ಟಿಸಿದ. ಮೋಡಗಳು ಸೂರ್ಯನನ್ನು ಮರೆಮಾಡಿದ್ದವು. ಮಂಜು ಮುಸುಕಿದ ಹೊರಗಿನ ವಾತಾವರಣ, ಇವನ ಮನಸಿನೊಳಗಿನ ಹವಾಮಾನವೆರಡು ಒಂದೇ ಎಂಬಂತಾಗಿತ್ತು. ಒಮ್ಮೆ ನಿಡಿದಾದ ಉಸಿರುಬಿಟ್ಟು ತೋಟದೊಳಗೆ ಹೆಜ್ಜೆಯಿಟ್ಟ.
ಮಳೆ ಬರುವ ಸೂಚನೆಯಿದ್ದರೂ ನದಿಯತ್ತ ಮುಖ ಮಾಡಿ ನಿಧಾನವಾಗಿ ಸಾಗಿದ. ತೋಟವನ್ನು ದಾಟುವುದರೊಳಗಾಗಿ ಮಳೆ ಸಣ್ಣಗೆ ಜಿನುಗ ತೊಡಗಿತು. ಅದರ ಪರಿವೇ ಇವನಿಗಿಲ್ಲ. ಬೇಲಿಯನ್ನು ದಾಟಿ ಹೊರಕ್ಕಡಿಯಿಟ್ಟಾಗ ಕಂಡಿದ್ದು ದೂರದಲ್ಲಿದ್ದ ನದಿ. ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದಾಗ ಕಂಡಿದ್ದು ಹಸಿರು ತುಂಬಿದ ಸುಂದರ ಕಾಡು. ಇದೇ ಕಾಡಿನಲ್ಲಿಯೇ ಅಲ್ಲವೇ ತಾನು ಸಣ್ಣವನಿದ್ದಾಗ ಸುತ್ತಾಡಿದ್ದು, ಮನಸಿಗೆ ಸಂತೋಷ ಕೊಡುತ್ತಿದ್ದ ಜಾಗವೀಗೇಕೆ ನೀರಸವೆನಿಸುತ್ತಿದೆ ಅಂದುಕೊಂಡ.
ಕೆಲಸಕ್ಕೆ ನಾಲ್ಕು ದಿನಗಳ ರಜೆ ಹಾಕಿ ಮನೆಗೆ ಬಂದಿದ್ದನಾತ. ಮೂರು ದಿನಗಳಾಗಲೇ ಮನೆಯೊಳಗೇ ಕೂತು ಕಳೆದಿದ್ದ. ಚಿಕ್ಕಂದಿನಲ್ಲಿ ಓಡಾಡುತ್ತಿದ್ದ ಗುಡ್ಡ-ಬೆಟ್ಟ, ಕಾಡಿನ ಕಡೆಯೂ ಹೋಗುವ ಮನಸ್ಸು ಮಾಡಿರಲಿಲ್ಲ. ನಾಳೆ ಬೆಳಗ್ಗೆ ಮತ್ತೆ ಕೆಲಸಕ್ಕೆ ಹಿಂದಿರುಗಬೇಕು ಎಂದು ಮನಸಿಗೆ ಬರುತ್ತಲೇ ಏಕೋ ಕಸಿವಿಸಿಗೊಂಡಿದ್ದ. ನದಿಯ ಕಡೆಗೊಮ್ಮೆ ಹೋಗಿ ಬರೋಣವೆಂದು ತೀರ್ಮಾನಿಸಿ ಹೊರಗೆ ಬಂದಿದ್ದ.
ಮಳೆ ಜೋರಾಗಿ ಸುರಿಯತೊಡಗಿತು. ಆದರೂ ಮುಂದುವರೆದು ನದಿಯ ದಂಡೆಯ ತುತ್ತತುದಿಯಲ್ಲಿ ಹೋಗಿ ನಿಂತು ಕೆಳಗೆ ನೋಡಿದ. ನದಿಯು ತನ್ನೊಳಗೆ ಬಾ ಎಂಬಂತೆ ಕರೆಯುವಂತೆನಿಸಿತು. ಹಾಗೇ ನೀರನ್ನೇ ಧಿಟ್ಟಿಸಿ ನೋಡುತ್ತಾ ನಿಂತುಬಿಟ್ಟ. ನಿಧಾನವಾಗಿ ಅಲ್ಲಿ ಅವಳ ಬಿಂಬ ಮೂಡತೊಡಗಿತು.
ಅವಳ ಮುಖದತ್ತಲೇ ಮುಗುಳ್ನಗುತ್ತಾ ನೋಡುತ್ತಿದ್ದ. ಆಕೆ ಇದಾವುದರ ಕಡೆ ಗಮನವೀಯದೆ ಮೊಬೈಲ್ ಹಿಡಿದು ಫೇಸ್ಬುಕ್ಕಿನಲ್ಲಿ ಬಂದಿದ್ದ ಸಂದೇಶಗಳಿಗೆ ಮರುತ್ತರವನ್ನು ಕಳುಹಿಸುವುದರಲ್ಲೇ ಮಗ್ನಳಾಗಿದ್ದಳು. ಇವನು ಅವಳನ್ನು ನೋಡುವ ಕಾರ್ಯವನ್ನು ಮುಂದುವರೆಸಿದ್ದ. ಭೋರೆಂದು ಬೀಸುತ್ತಿದ್ದ ಗಾಳಿಯಾಗಲೀ, ಒಂದೇ ಸಮನೆ ಅರ್ಧ ಗಂಟೆಯಿಂದ ಸುರಿಯುತ್ತಿದ್ದ ಅಬ್ಬರದ ಮಳೆಯಾಗಲಿ ಇಬ್ಬರ ಕೆಲಸಕ್ಕೂ ವಿಘ್ನ ತಂದಿರಲಿಲ್ಲ.
ತನ್ನ ಯೋಚನಾ ಲಹರಿಯಿಂದ ವಾಸ್ತವಿಕ ಜಗತ್ತಿಗೆ ಹೊರಬರುತ್ತಿದ್ದಂತೆಯೇ ಚಳಿಯಾವರಿಸಿತು. ಕೈಗಳನ್ನು ಬಿಗಿಯಾಗಿ ದೇಹಕ್ಕೆ ಅಮುಕಿ ಹಿಡಿದುಕೊಂಡು ನದಿಯತ್ತ ನೋಡಿದ. ಕತ್ತಲಿನಲ್ಲಿ ಏನೂ ಕಾಣಿಸದಿದ್ದರೂ ಹರಿವಿನ ದನಿಯನ್ನು ಆಲಿಸಿದ. ಪ್ರಶಾಂತವಾಗಿ ಪ್ರವಹಿಸುತ್ತಿದ್ದ ನೀರಿನ ಜುಳುಜುಳು ನಿನಾದ ಕಿವಿಗೆ ಇಂಪಾಗಿ ಬಡಿಯುತ್ತಿತ್ತು. ತನ್ನ ಮನಸ್ಸು ಕೂಡ ಈಗ ನದಿಯ ನೀರಿನಂತೆಯೇ ಶಾಂತಸ್ಥಿತಿಗೆ ಮರಳಿದೆ, ಎಲ್ಲವೂ ಸ್ವಲ್ಪ ದಿನದಲ್ಲಿ ಸರಿಯಾಗಬಹುದು ಎಂದುಕೊಂಡ.
ಮಳೆ ಯಾವಾಗಲೋ ನಿಂತು ಹೋಗಿತ್ತು. ತಾನಿಲ್ಲಿಗೆ ಬಂದು ಬಹಳ ಸಮಯವಾಗಿದೆ, ಮನೆಯಲ್ಲಿ ಅಮ್ಮ ಗಾಬರಿಪಡುತ್ತಿರಬಹುದು, ತಾನೆಷ್ಟು ಹೊತ್ತು ಯೋಚನೆ ಮಾಡುತ್ತಾ ನಿಂತುಬಿಟ್ಟೆ ಎಂದು ತನ್ನಷ್ಟಕ್ಕೆ ನಗುತ್ತಾ ತಲೆ ಕೆರೆದುಕೊಂಡು ಹಿಂದೆ ತಿರುಗಿ ಹತ್ತು ಹೆಜ್ಜೆಗಳನ್ನಿಡುವಷ್ಟರಲ್ಲಿ ಏನೋ ನೆನಪಾಗಿ ಜೇಬಿಗೆ ಕೈ ಹಾಕಿದ. ಅದಿನ್ನೂ ಅಲ್ಲೇ ಭದ್ರವಾಗಿತ್ತು. ಮತ್ತೆ ತಾನು ಹೊಸ ಜೀವನವನ್ನು ಆರಂಬಿಸಬೇಕಾದರೆ ಅವಳ ನೆನಪಿನ ಯಾವುದೇ ವಸ್ತುಗಳೂ ಇರಬಾರದೆಂದುಕೊಂಡು ಕೊನೆಯ ಬಾರಿಗೆಂಬಂತೆ ಕೈಯಲ್ಲಿಡಿದು ಎದೆಗೊಮ್ಮೆ ಒತ್ತಿಕೊಂಡು ನಿಡಿದಾದ ಉಸಿರುಬಿಟ್ಟ.
ಸಮಯ ರಾತ್ರಿ ಒಂಬತ್ತಾದರೂ ಮನೆಗೆ ಮಗ ಬಾರದಿರುವುದನ್ನು ನೋಡಿ, ಹೆಂಡತಿಯ ಒತ್ತಾಯದ ಮೇರೆಗೆ ಹೊರಟಿದ್ದರು ರಾಮರಾಯರು. ನದಿಯ ಬಳಿ ಹೋಗಿಬರುತ್ತೇನೆಂದು ಹೇಳಿ ಹೋಗಿದ್ದರಿಂದ ನೇರವಾಗಿ ದಂಡೆಯ ಬಳಿಯೇ ಸಾಗಿದರು. ಟಾರ್ಚ್ ಬೆಳಕನ್ನು ಹಾಯಿಸಿದಾಗ ಅವರಿಗೆ ಕಂಡದ್ದು ಆತ ಯಾವಾಗಲೂ ತನ್ನ ಬಳಿಯೇ 24 ಗಂಟೆಯೂ ಇಟ್ಟುಕೊಂಡಿರುತ್ತಿದ್ದ ಕೆಂಪು ಬಣ್ಣದ ಟೆಡ್ಡಿ-ಬಿಯರ್ ಕೀ-ಚೈನ್ ಮಾತ್ರ.
ಹಾಗಾದರೆ ಅವನು ಧುಮುಕಿದ್ದು ಹಳೆಯ ನೆನಪುಗಳ ಲೋಕದೊಳಗೋ....? ಅಥವಾ ನದಿಯ ನೀರಿನಲ್ಲೋ.....? ಅವಳ ನೆನಪು ಒಂದು ವಸ್ತುವಿನ ಅಂತ್ಯದಿಂದ ಮಾಸದೆಂದೆನಿಸಿ ತನ್ನ ಅಂತ್ಯವನ್ನೇ ಹಾಡಿದನೇ?