You
A story about a man who is trying to find himself.
ಭಾಗ 1
ಸೂರ್ಯನಾಗಲೇ ಪೂರ್ವದಲ್ಲಿ ನಿಧಾನವಾಗಿ ಮೇಲೇರುತ್ತಿದ್ದ. ಸಂಧ್ಯಾ ಅಡುಗೆ ಮನೆಯ ಕೆಲಸದಲ್ಲಿ ನಿರತಳಾಗಿದ್ದಳು. ಜಯಂತ್ ಸ್ನಾನದ ಕೋಣೆಯಲ್ಲಿ ಗುನುಗುತ್ತಿದ್ದ ಹಾಡು ಅಲ್ಲಿಯವರೆಗೂ ಕೇಳುತ್ತಿತ್ತು. ಅವರು ಎರಡು ಮಹಡಿಗಳ ಮನೆಯನ್ನು ಖರೀದಿಸಿದ್ದರು. ಮೇಲಿನ ಮಹಡಿಯಲ್ಲಿ ಜಯಂತ್ ಇರಲು ನಿರ್ಧರಿಸಿದರೆ, ಸಂಧ್ಯಾ ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದಳು. ಅವನ ನಿರಂತರ ಸೂಚನೆಯ ನಂತರವೂ ಇಂದು ಅವನಿಗಾಗಿ ಅಡುಗೆ ಮಾಡಿದ್ದಳು.
ಅವನಿಗಾಗಿ ಅಡುಗೆ ಮಾಡಿ ಬಡಿಸುವುದು ಎಂದರೆ ಅವಳಿಗೆ ಇಷ್ಟದ ಕೆಲಸ. ಅವನಿಗಾಗಿ ಏನಾದರೂ ಮಾಡುವುದನ್ನು ಅವಳು ಖುಷಿ ಪಡುತ್ತಿದ್ದಳು. ಅವಳು ಅವನನ್ನು ತುಂಬಾ ಪ್ರೀತಿಸುತ್ತಿದ್ದಳು. ತನ್ನನ್ನು ತಾನು ಪ್ರೀತಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಎಂದೇ ಹೇಳಬಹುದು. ಯಾರೂ ಕೂಡ ಹಿಂದೆಂದೂ ಕೂಡ ಆತನನ್ನು ಪ್ರೀತಿಸದ್ದಷ್ಟು ಆತನನ್ನು ಇಷ್ಟಪಡುತ್ತಿದ್ದಳು.
ಆತನ ಹಾಡು ಇದ್ದಕ್ಕಿದ್ದಂತೆಯೇ ನಿಂತು ಹೋಯಿತು. ಅದಾಗಿ ಒಂದು ನಿಮಿಷಕ್ಕೆ ಬಾತ್‌ರೂಮಿನ ಬಾಗಿಲು ತೆರೆದು, ತನ್ನ ಕೋಣೆಯತ್ತ ಸಾಗುವುದನ್ನು ನೋಡಿದಳು. ಅವನತ್ತ ತನ್ನ ಕಣ್ಣುಗಳು ವಾಲುವುದನ್ನು ತಡೆಹಿಡಿಯಲಾಗಲಿಲ್ಲ. ಆರು ಅಡಿ ಎತ್ತರದ ನೀಳಕಾಯದ, ಆಕರ್ಷಕ ಮೈಕಟ್ಟಿನ, ಮುಂಜಾನೆ ಸೂರ್ಯನ ಬೆಳಕನ್ನು ಹೋಲುವ ಚರ್ಮ... ಏನನ್ನೂ ಅಲ್ಲಗಳೆಯುವಂತಿಲ್ಲ, ಆತನಲ್ಲಿ ಇವಳ ಬಗೆಗೆ ಯಾವುದೇ ರೀತಿಯ ಭಾವನೆಗಳನ್ನು ಹೊಂದಿಲ್ಲ ಎಂಬ ವಿಷಯವನ್ನು ಹೊರತುಪಡಿಸಿ.
ಸಂಧ್ಯಾ ತಟ್ಟೆಯಲ್ಲಿ ತಿಂಡಿಯನ್ನು ಹಾಕಿ ಸಿದ್ದಪಡಿಸಿದಳು. ಜಯಂತ್ ಕಚೇರಿಗೆ ಹೋಗುವ ಬಟ್ಟೆಯನ್ನು ಧರಿಸಿ ಕೆಳಗೆ ಬಂದನು. ಅಷ್ಟರಲ್ಲಿ ತನ್ನ ತಟ್ಟೆಗೆ ತಿಂಡಿ ಹಾಕಿಕೊಂಡಳು ಸಂಧ್ಯಾ.. ಜಯಂತ್ ನಿಟ್ಟುಸಿರೊಂದನ್ನು ಬಿಟ್ಟು ತಟ್ಟೆಯ ಕಡೆ ನೋಡಿ ನೆಲದತ್ತ ದೃಷ್ಟಿ ಹರಿಸಿದ. ಅವಳತ್ತ ಕಣ್ಣೆತ್ತಿಯೂ ನೋಡದೆ - "ನೀನು ನನಗೆ ಅಡುಗೆ ಮಾಡಿ ಹಾಕುವುದು ಇಷ್ಟ ಇಲ್ಲ. ನನ್ನ ಅವಶ್ಯಕತೆಗಳನ್ನು ನಾನೇ ನೋಡಿಕೊಳ್ಳುತ್ತೇನೆ" ಎಂದು ಒಂದೇ ಉಸಿರಿನಲ್ಲಿ ಉಚ್ಚರಿಸಿ ಹೊರಬಾಗಿಲಿನ ಕಡೆಗೆ ಬಿರಬಿರನೆ ಹೊರಟುಹೋದ.
ಇದೇನು ಅವಳಿಗೆ ಹೊಸ ಅನುಭವ ಅಲ್ಲ. ಅವಳು ಅವನಿಗಾಗಿ ಅಡುಗೆ ಮಾಡಿ ಇಡುವುದು ಹಾಗೂ ಆತ ಸಾಮಾನ್ಯವಾಗಿ ತಿನ್ನದೆ ಹೋಗುವುದು - ಅದು ದಿನನಿತ್ಯದ ಸಂಗತಿ. ಅವನ ಮುಗಿಯದ ಮೌನ ಹಾಗೂ ಸಿಗದ ಸಾನಿಧ್ಯ ಅವಳಿಗೆ ರೂಡಿಯಾಗಿ ಹೋಗಿತ್ತು. ಈ ವಿಷಯವನ್ನು ಯಾರಿಗೂ ಅವಳು ಹೇಳಿರಲಿಲ್ಲ. ಹೇಗೆ ಹೇಳಬೇಕೆಂಬುದೂ ಸಹ ಅವಳಿಗೆ ದೊಡ್ಡಸಮಸ್ಯೆ ಆಗಿತ್ತು. ತನ್ನ ತಮ್ಮನಿಗೆ ಹೇಳಬೇಕೆಂದು ಎಷ್ಟೋ ಸಾರಿ ಅಂದುಕೊಳ್ಳುತ್ತಿದ್ದಳು. ಆದರೆ ಇನ್ನೂ ಸ್ವಲ್ಪ ಸಮಯ ಕಳೆದರೆ ಎಲ್ಲವೂ ಸರಿ ಹೋಗಬಹುದೆಂದು ಸುಮ್ಮನಿದ್ದಳು.
“ಒಂದು ನಿಮಿಷ..” - ಜಯಂತ್ ಬಾಗಿಲು ಬಳಿ ಹೋಗಿವ ಮೊದಲೇ ಆತನನ್ನು ಕರೆದಳು. ಆಕೆ ತನ್ನ ಅಮಾಯಕ ಕಣ್ಣುಗಳಲ್ಲಿ ಹೇಳಲಾರದಷ್ಟು ಪ್ರೀತಿ ಮತ್ತು ಹಲವಾರು ಪ್ರಶ್ನೆಗಳನ್ನು ಹೊಂದಿದ್ದಳು. ಜಯಂತ್ ಹಿಂದೆ ತಿರುಗದೆ ಸುಮ್ಮನೆ ನಿಂತುಕೊಂಡ. "ನನ್ನ ಕೆಲವು ಬಂಗಾರದ ಸರಗಳು ಕಾಣಿಸ್ತಾ ಇಲ್ಲ" - ಎಂದಳು. "ಎಲ್ಲಿ ಇಟ್ಟಿದ್ದೆ ಅವನ್ನ?" - ಎಂದ ಜಯಂತ್ ಅಸಹನೆಯಿಂದ. “ನನ್ನ ವಾರ್ಡ್ರೋಬಿನಲ್ಲೇ ಇತ್ತು.” “ಸರಿಯಾಗಿ ಇನ್ನೊಂದ್ಸಾರಿ ನೋಡು.” "ನೋಡಿದೆ ಸರಿಯಾಗಿ. ಎಲ್ಲೂ ಕಾಣಿಸ್ತಾ ಇಲ್ಲ. ಅವೆಲ್ಲಾ ನನ್ನ ಫೇವರೇಟ್..". ಕೊನೆಯ ವಾಕ್ಯ ಹೇಳುವಾಗ ಆಳುವ ದ್ವನಿ ಮಾಡಿದಳು. "ಓಕೆ. ಸಂಜೆ ಬಂದ್ಮೇಲೆ ಏನು ಮಾಡೋದು ಅಂತ ನೋಡೋಣ" - ಎಂದು ಹೇಳಿದ್ದೇ ಮನೇಯಿಂದ ಹೊರನಡೆದ.
ಕಳೆದ ಕೆಲವು ವಾರಗಳಲ್ಲಿ ಇದೇ ಅವರಿಬ್ಬರ ನಡುವಿನ ಅತ್ಯಂತ ಹೆಚ್ಚಿನ ಸಮಯದ ಸಂಭಾಷಣೆಯಾಗಿತ್ತು. ಜಯಂತ್ ಹೋಗುವುದನ್ನು ನೋಡಲು ತಲೆ ಹೊರಹಾಕಿದ ಸಂಧ್ಯಾಳತ್ತ ನೆರೆಮನೆಯ ಮಮತಾ ನಗೆ ಬೀರಿದರು.
"ಬನ್ನಿ ಆಂಟಿ. ನಿಮ್ಮದು ತಿಂಡಿ ಆಯ್ತಾ?" "ಹಾ.. ನಂದಾಯ್ತು. ನಮ್ಮ ಮನೆ ಕೀ ಬೇಕಿತ್ತು. ಸ್ವಲ್ಪ ತಂದು ಕೊಡ್ತೀಯಾ?" - ಎಂದು ಮನೆಯ ಬಳಿ ಬಂದರು. "ಹಾ. ಬಂದೆ ಒಂದ್ನಿಮಿಷ" ಎಂದು ಸಂಧ್ಯಾ ಒಳನಡೆದಳು.
ಮಮತಾ ಅವರ ಮನೆ ಇವರ ಮನೆಯ ಮುಂದೆ ಇತ್ತು. ಅವರು ಮನೆಯನ್ನು ಮಾರಾಟ ಮಾಡುವ ಯೋಚನೆಯಲ್ಲಿದ್ದರು. ಒಂದು ವೈದ್ಯರ ಕುಟುಂಬ ಆಗಲೇ ಮನೆಯನ್ನು ನೋಡಿಕೊಂಡು ಹೋಗಿದ್ದರು. ಸಂಧ್ಯಾ ಹೇಗೂ ಹೆಚ್ಚಿನ ಸಮಯ ಮನೆಯಲ್ಲೇ ಕಳೆಯುತ್ತಿದ್ದರಿಂದ, ಕೀಯನ್ನು ಇವಳ ಬಳಿ ನೀಡಿರುತ್ತಿದ್ದರು. ಮಮತಾ ಕೀಯನ್ನು ತೆಗೆದುಕೊಂಡು ಧನ್ಯವಾದ ಹೇಳಿ ಮನೆಯೊಳಗೆ ನಡೆದರು.
ಸಂಧ್ಯಾ ಒಳಬಂದು ಬಾಗಿಲು ಭದ್ರಪಡಿಸಿದಳು. ಮನೆ ಎಲ್ಲಾ ಖಾಲಿ. ಟೇಬಲ್ ಮೇಲಿದ್ದ ತಿಂಡಿಯ ತಟ್ಟೆಗಳನ್ನು ನೋಡಿದಳು. ತಿನ್ನುವ ಮನಸ್ಸಾಗದೆ ತಡವಾಗಿ ತಿಂದರಾಯಿತೆಂದು ಮತ್ತೊಂದು ತಟ್ಟೆಯಿಂದ ಮುಚ್ಚಿ ಟ್ಟಳು. ವೇಗವಾಗಿ ತನ್ನ ರೂಮಿಗೆ ಹೋಗಿ ಕಪಾಟಿನಲ್ಲಿದ್ದ ಅವಳ ಮದುವೆ ರೆಸೆಪ್ಶನ್ ಫೋಟೋ ಆಲ್ಬಂ ತೆಗೆದಳು, ಜಯಂತ ಅವಳತ್ತ ನೋಡಿ ಕೊನೆಯ ಬಾರಿ ನಕ್ಕಿದ್ದರ ಸಾಕ್ಷಿ.
ತನ್ನ ಬೆರಳುಗಳನ್ನು ನಗುಮೊಗದ ಜಯಂತನ ಫೋಟೋ ಮೇಲೆ ಆಡಿಸಿದಳು. ಎರಡು ವರ್ಷ.. ಉಹೂ.. ಎರಡೂವರೆ ವರ್ಷ. ಇಬ್ಬರೂ ಜೊತೆಯಾಗಿ ಹೊರಗೆ ಹೋಗಿ ಬಂದ ನಿದರ್ಶನಗಳಿಲ್ಲ. ತನ್ನ ಆರೋಗ್ಯದಲ್ಲಿ ಏರುಪೇರಾದಾಗಲು ಕೂಡ ಅವಳನ್ನು ತನ್ನ ಬಳಿ ಬಿಟ್ಟುಕೊಳ್ಳಲಿಲ್ಲ. ಆದರೆ ಆತ ಇಷ್ಟು ಕಠಿಣ ಮನಸ್ಸಿನ ವ್ಯಕ್ತಿಯಾಗಲು 'ಏನೋ ಒಂದು' ಕಾರಣವಿರಲೇ ಬೇಕು. ಆ 'ಏನೋ ಒಂದು' ಅವಳಿಂದ ಅವನನ್ನು ದೂರ ಮಾಡಲು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ತನ್ನ ಪ್ರಭಾವವನ್ನು ಭೀರಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಆ 'ಏನೋ ಒಂದು' ಅವಳನ್ನು ದ್ವೇಷಿಸಲು ಪ್ರೇರೇಪಿಸಿದೆ. ಅದು ಏನು?
ಮನಸ್ಸು ಭಾರವಾದ ಅನುಭವವಾಯಿತು. ತನ್ನ ಆ 'ಏನೋ ಒಂದು', ಆತ ತನ್ನನ್ನು ದ್ವೇಷಿಸುವಂತೆ ಮಾಡಿದೆ ಎಂದು ಅರಿತಿದ್ದಳು. ಆದರೆ ಅದು ಏನು ಎಂಬುದೇ ಬಿಡಿಸಲಾಗದ ಒಗಟಾಗಿತ್ತು. ಅದೊಂದು ಭರಿಸಲಾರದ ಯಾತನೆ. ಅವಳ ತಪ್ಪು ಏನೆಂದು ತಿಳಿಯದೆಯೂ ಶಿಕ್ಷೆ ಅನುಭವಿಸುವಂತಾಗಿತ್ತು. ಜಯಂತ ಮಾಡಿದ್ದ ತಮ್ಮ ಮದುವೆಯ ಮುಂಚಿನ ಕೊನೆಯ ಕರೆಯ ಸಂಭಾಷಣೆಯನ್ನು ನೆನೆದು ಕಣ್ಣಂಚಿನಿಂದ ನೀರು ಜಿನುಗಿತು.
"ಹಲೋ..", ಕರೆಯನ್ನು ಸ್ವೀಕರಿಸಿದ ಸಂಧ್ಯಾ ಸಿಹಿ ದ್ವನಿಯಲ್ಲಿ ಹೇಳಿದಳು "ನನ್ನ ಪ್ರೀತಿಯ ಸ್ವರ್ಗವನ್ನು ನೋಡಲು ಕೇವಲ ಒಂದು ದಿನ ಉಳಿದಿದೆ. ನಾಳೆ, ಇಷ್ಟೊತ್ತಿಗೆ ನೀನು ನನ್ನ ಅರ್ಧಾಂಗಿ. ಕೇವಲ ನೀನು ಮಾತ್ರ ನನ್ನ ಜೀವನದಲ್ಲಿ ಹೇಳಲಾಗದಷ್ಟು ಸಂತೋಷ.. ಖುಷಿಯನ್ನು ತರುವುದಕ್ಕೆ ಸಾಧ್ಯ." "ಸಾಕು ಸಾಕು. ಸ್ವಲ್ಪ ಏನಾದ್ರೂ ಮಾತನ್ನ ಉಳಿಸ್ಕೊಳ್ಳಿ. ಮದುವೆ ನಂತರನು ಬೇಕಾಗ್ಬಹುದು" - ಎಂದು ನಾಚುವ ದ್ವನಿಯಲ್ಲಿ ಹೇಳಿದಳು. "ನಿನಗೆ ನನ್ನ ಮೇಲಿನ ಪ್ರೀತಿಗೆ ಹೇಗೆ ಕೊನೆಯಿಲ್ಲವೋ ಹಾಗೆಯೇ ನಿನ್ನ ಪ್ರೀತಿಯನ್ನು ವರ್ಣಿಸುವ ನನಗೂ ಕೂಡ ಪದಗಳ ಬರ ಇಲ್ಲ." "ಓ ಮೈ ಗಾಡ್. ಕೇಳಿ ಸ್ವಲ್ಪ ಕೇಳಿ. ಡೊಂಟ್ ಮೆಕ್ ಮೀ ಬ್ಲಷ್. ಓಕೆ?" "ನಿನ್ನ ಆ ಕೆಂಪೇರಿದ ಕೆನ್ನೆ ಗಳನ್ನ ತುಂಬಾ ಮಿಸ್ ಮಾಡ್ಕೊಳ್ತಾ ಇದೀನಿ ಕಣೆ" ಎಂದು ಅವಳಿಗೂ ಕೇಳಿಸುವಂತೆ ಧೀರ್ಘವಾದ ಉಸಿರುಬಿಟ್ಟ. "ಹೇ.. ಕೇಳಿ ಇಲ್ಲಿ. ನಾವು ಈಗ ಹೊರಡ್ತೇವೆ. ಸಂಜೆ ಸಿಗ್ತೀನಿ." ಎಂದು ನಗುತ್ತಾ ಕರೆಯನ್ನು ಅಂತ್ಯಗೊಳಿಸಿದಳು.
ಆ ಸುಂದರವಾದ ಸಂಭಾಷಣೆಯು ಮನಸ್ಸಿನಲ್ಲಿ ಓದುತ್ತಿದ್ದಂತೆಯೇ ಕಣ್ಣುಗಳು ತೇವಗೊಂಡಿದ್ದವು. ಅದೇ ಕೊನೆಯ ಸಂಭಾಷಣೆ. ಅವರಿಬ್ಬರ ನಡುವೆ ನಡೆದ ಅಕ್ಕರೆಯಿಂದ ಕೂಡಿದ ಮಾತುಕತೆ. ರಿಸೆಪ್ಶನ್ ಆದಮೇಲೆ ಆತ ತನ್ನ ರೂಮಿನ ಕಡೆಗೆ ಹೋಗುವಾಗ ಆತ ಬೀರಿದ ಮುಗುಳ್ನಗುವೆ ಕೊನೆಯ ನಗೆ.
ತಲೆ ತಿರುಗಿದಂತಾಗಿ ದಿಂಬಿಗೆ ಒರಗಿದಳು. ನಿದ್ದೆ ಆವರಿಸುವವರೆಗೂ ಅಳುತ್ತಲೇ ಇದ್ದಳು…
ಭಾಗ 2
ಅನಿತಾ ತನ್ನ ಎಡಗೈ ತೋರುಬೆರಳಿನಿಂದ ಮುಖದ ಮೇಲೆ ಇಳಿ ಬಿದ್ದಿದ ಮುಂಗುರಳನ್ನು ಹಿಂದೆ ಸರಿಸಿದಳು. ಅವಳು ಯಾವಾಗಲೂ ತಾನು ಸುಂದರವಾಗಿ ಕಾಣಬೇಕೆಂದು ಇಲ್ಲಸಲ್ಲದ ಸರ್ಕಸ್ ಮಾಡುತ್ತಿದ್ದಳು. ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡು ಪರ್ಫೆಕ್ಟ್ ಎಂದುಕೊಂಡಳು.
"ಸಂಧ್ಯಾಳಂತ ಕೆಲವರಿಗೆ ಹೇಗೆ ಸಿಂಗರಿಸಿಕೊಳ್ಳಬೇಕೆಂದು ತಿಳಿದಿಲ್ಲ. ಅದಕ್ಕೆ ಅವಳ ಗಂಡ ಅವಳತ್ತ ತಿರುಗಿಯೂ ನೋಡುವುದಿಲ್ಲ." - ಒಬ್ಬಳೇ ಗೊಣಗುಟ್ಟಿದಳು.
ಅನಿತಾ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಅವಳು ತನ್ನನ್ನು ತಾನು ಹೇಗೆ ಪೋಷಿಸಿಕೊಳ್ಳಬೇಕೆಂದು ತಿಳಿದಿದ್ದಳು. ಹುಡುಗರು ಮಾತ್ರವಲ್ಲದೇ ಹುಡುಗಿಯರೂ ಕೂಡ ಅವಳ ಸೌಂದರ್ಯ ಪ್ರಜ್ಞೆಯನ್ನು ಹೊಗಳುತ್ತಿದ್ದರು.
ಇಬ್ಬರೂ ಒಂದೇ ಅಪಾರ್ಟ್ಮೆಂಟ್ನಲ್ಲಿದ್ದಿದ್ದರಿಂದ, ಅನಿತಾ ಸಂಧ್ಯಾಳನ್ನು ಯಾವಾಗಲೂ ಕೀಳಾಗಿ ನೋಡುತ್ತಿದ್ದಳು. ಸಂಧ್ಯಾಳ ಬಗೆಗೆ ಜಯಂತ್ ಅಸಹ್ಯಪಟ್ಟುಕೊಳ್ಳುತ್ತಾನೆ ಎಂದು ಬಾಯಿಬಿಟ್ಟು ಹೇಳದಿದ್ದರೂ ಕೂಡ ಮನಸ್ಸಿನಲ್ಲೇ ನಿರ್ಧರಿಸಿದ್ದಳು. “ಸಂಧ್ಯಾ ಒಬ್ಬ ಮೂರ್ಖ ಹೆಣ್ಣು" ಎಂಬುದು ಅವಳ ಅಭಿಪ್ರಾಯವಾಗಿತ್ತು.
ಆದರೆ ಒಂದು ದಿನವೂ ಕೂಡ ಜಯಂತ್ ನನ್ನು ನೋಡುವುದನ್ನು ತಪ್ಪಿಸುತ್ತಿರಲಿಲ್ಲ. ಅವನ ದೇಹದಾರ್ಡ್ಯ - ಬಲಿಷ್ಟವಾದ ಮಾಂಸಖಂಡಗಳು, ಮುಖ ಲಕ್ಷಣಗಳು, ಎತ್ತರ - those her husband is missing made her go crazy..! ಅಷ್ಟೇ ಅಲ್ಲದೇ ಜಯಂತ್ ತನ್ನ ಸ್ನೇಹಿತನೊಬ್ಬನ ಬಳಿ ಸಂಧ್ಯಾಳ ಡ್ರೆಸಿಂಗ್ ಸೆನ್ಸ್ ಹಾಗೂ ಅವಳಿಗೆ ಅವಳ ಮೇಲೆಯೇ ಕಾಳಜಿ ಇರದಿರುವುದರ ಬಗ್ಗೆ ದೂಷಿಸುತ್ತಿರುವುದು ಕಿವಿಗೆ ಬಿದ್ದಿತ್ತು. ಆ ದಿನವೇ ಅನಿತಾ ಒಂದು ನಿರ್ಧಾರಕ್ಕೆ ಬಂದಿದ್ದಳು. ತನ್ನಂತಹ ಹೆಣ್ಣನ್ನೇ ಜಯಂತ್ ಇಷ್ಟ ಪಡುವುದು ಎಂದು ಲೆಕ್ಕ ಹಾಕಿದಳು. ಆತನನ್ನು ತನ್ನೆಡೆಗೆ ಸೆಳೆಯಲು ವಿಶೇಷ ಕಾಳಜಿ ವಹಿಸಿ ತನ್ನ ದೇಹವನ್ನು ಮತ್ತು ಮನಸ್ಸನ್ನು ಸಿದ್ದಪಡಿಸಿಕೊಳ್ಳತೊಡಗಿದಳು. ಆತ ಸಂಧ್ಯಾಳಲ್ಲಿ ಏನನ್ನು ದ್ವೇಷಿಸುತ್ತಾನೋ ಅದನ್ನು ತನ್ನಲ್ಲಿ ಇಷ್ಟಪಡಬೇಕೆಂದು ಹಾತೊರೆದಳು. ಜಯಂತ್ ಯಾರನ್ನಾದರೂ ಇಷ್ಟ ಪಡುತ್ತಾನೆ ಎಂದಾದರೆ ಅದು ತಾನೇ ಆಗಿರಬೇಕೆಂದು ಬಯಸಿದಳು. ಅವಳು ನಿಧಾನವಾಗಿ ತನ್ನನ್ನೇ ಸಂಪೂರ್ಣವಾಗಿ ಬದಲಿಸಲು ಪ್ರಾರಂಭಿಸಿದಳು. Is this a sign of flood in life of Sandhya? Wait..
"ಟೂ ಬ್ಯಾಡ್. ಅವನು ನನ್ನ ಕಡೆ ಗಮನ ಕೊಡೋದೇ ಇಲ್ಲ." ಅನಿತಾ ತಾನು ಅತ್ಯಂತ ಸುಂದರವಾಗಿ ಮೇಕಪ್ ಹಾಗೂ ಸೀರೆಯಲ್ಲಿ ಕಂಗೊಳಿಸುತ್ತಿದ್ದೇನೆ ಎಂದು ಅಂದುಕೊಂಡ ದಿನವೂ ಕೂಡ ಇವಳತ್ತ ಕಣ್ಣು ಹಾಯಿಸಲಿಲ್ಲ.
"ನೀನು ಗ್ರೀಕ್ ದೇವತೆಯಂತೆ ಕಾಣುತ್ತಿದ್ದೀಯ. ಜಯಂತನಂತ ಗಂಡಸರು ಮೂರ್ಖ ಹೆಣ್ಣಿನ ಹಿಂದೆಯೇ ಹೋಗುತ್ತಾರೆ" ಎಂದು ತನ್ನನ್ನು ತಾನೇ ಹೊಗಳಿಕೊಂಡು ಸಮಾಧಾನಮಾಡಿಕೊಂಡಳು. ಪ್ರತಿದಿನವೂ ಸುಂದರವಾಗಿ ಅಲಂಕರಿಸಿಕೊಂಡು ಅವನಿಗಾಗಿ ಕಾದು ನಿಂತಿರುತ್ತಿದ್ದಳು, ಟು ಲೀವ್ ಹಿಸ್ ಸ್ಟುಪಿಡ್ ವೈಫ್ ಬ್ಯಾಕ್ ಅಂಡ್ ಕಮ್ ಟು ಹರ್. ಒಂದು ದಿನ ಅವಳ ಅದೃಷ್ಟ ಖುಲಾಯಿಸಿಯೇ ಬಿಟ್ಟಿತ್ತು. ಬೆಳಗಿನ ಉಪಹಾರವನ್ನು ಮುಗಿಸಿ ಏನನ್ನೋ ಖರೀದಿಸಲು ಹೊರಟಳು. ಅನಿತಾ ತನ್ನ ಗಂಡನನ್ನು ತನ್ನಿಂದ ಕಿತ್ತುಕೊಳ್ಳಲು ಹವಣಿಸುತ್ತಿದ್ದಾಳೇ ಎಂದು ತಿಳಿದಿರಲಿಲ್ಲ. ಸಂಧ್ಯಾ ತನ್ನ ಸುತ್ತಮುತ್ತಲೂ ನಡೆಯುತ್ತಿರುವ ವಿದ್ಯಮಾನಗಳತ್ತ ಕೇಂದ್ರಿಕರಿಸುವುದನ್ನು ನಿಲ್ಲಿಸಿದಳು. ಅವಳು ತನ್ನದೇ ಪ್ರಪಂಚದಲ್ಲಿ ಬಂದಿಯಾದಳು - ದ್ವಂದ್ವ ಮತ್ತು ದುಃಖಗಳಿಂದ ಕೂಡಿದ ಲೋಕದಲ್ಲೇ ಸಂತೋಷವನ್ನು ಹುಡುಕತೊಡಗಿದಳು. ಇದರ ಸಂಪೂರ್ಣ ಲಾಭವನ್ನು ಅನಿತಾ ಪಡೆದಳು.
ಸಂಧ್ಯಾ ನಿದ್ದೆಯಿಂದೆದ್ದಾಗ ಗಡಿಯಾರ ಮೂರು ತೋರಿಸುತ್ತಿತ್ತು. ಹೊಟ್ಟೆ ಹಸಿವಿನಿಂದ ಚುರುಕ್ ಎಂದಾಗಗಡಿಬಿಡಿಯಿಂದ ಎದ್ದು, ಕೂದಲನ್ನು ಗಂಟು ಹಾಕಿಕೊಂಡು ಟೇಬಲ್ ಮೇಲಿಟ್ಟಿದ್ದ ತಟ್ಟೆಯನ್ನು ತೆರೆದಾಗ ಏನು ಇರಲಿಲ್ಲ. ಯಾರೋ ತಿಂದಿದ್ದರು. ಒಂದು ಕ್ಷಣ ದಿಗಿಲಾದರೂ ಕೂಡ ಅವಳಿಗೆ ನೆನಪಿತ್ತು - ತಾನು ಅದನ್ನು ಮುಚ್ಚಿಟ್ಟಿದ್ದೆ ಎಂದು. ತಾನೇ ನಿದ್ದಗಣ್ಣಿನಲ್ಲಿ ಎಂದು ತಿಂದಿರಬಹುದೆ ಎಂದು ನೆನಪಿಸಿಕೊಳ್ಳಲು ನೋಡಿದಳು. ಮನೆಯ ಮುಖ್ಯದ್ವಾರದ ಕಡೆಗೆ ನಡೆದಾಗ ಅವಳ ಭಯಕ್ಕೆ ಇದು ಒಂದು ಎಂಬಂತೆ ಡೋರ್ ಲಾಕ್ ಆಗಿರಲಿಲ್ಲ. ತಿಂಡಿಯನ್ನು ಒಬ್ಬ ಕಳ್ಳ ಕದ್ದಿರುವುದು ಸುಳ್ಳು. ಆದರೆ ತನ್ನ ಆಭರಣಗಳ ಕಳುವಿಗೆ ಆತನೇ ಕಾರಣವಾಗಿರಬಹುದೆ ಎಂಬ ಯೋಚನೆ ಸುಳಿಯಿತು. ಆದರೆ ಹಗಲು ಹೊತ್ತಿನಲ್ಲಿ ಮನೆಗೆ ಯಾರು ನುಗ್ಗಿರಬಹುದು. ಮೊದಲು ಜಯಂತನಿಗೆ ಕರೆ ಮಾಡಿ ತಿಳಿಸುವುದು ಎಂದು ಕೊಂಡರೂ ಮಾಡಲಿಲ್ಲ. ಸೋಫಾದ ಮೇಲೆ ಅದನ್ನೇ ಯೋಚಿಸುತ್ತಾ ಇದ್ದವಳಿಗೆ ಮತ್ತೆ ನಿದ್ದೆ ಬಂದಿದ್ದು ತಿಳಿಯಲಿಲ್ಲ.
ಆಗಲೇ ಏಳು ಮೂವತ್ತಾಗಿತ್ತು. ಜಯಂತ್ ರಾತ್ರಿಯ ಊಟಕ್ಕೆ ಎಂದಿಗೂ ಮನೆಗೆ ಬಂದಿರಲಿಲ್ಲ. ಆ ದಿನ ಸುಸ್ತಾಗಿದ್ದರಿಂದ ಕೆಲವು ಬ್ರೆಡ್ಗಳನ್ನಷ್ಟೇ ತೆಗೆದುಕೊಂಡು ಒಂದು ತುಂಡನ್ನು ಬಾಯಿಗಿರಿಸುವಷ್ಟರಲ್ಲಿ ಬಾಗಿಲು ರಿಂಗ್ ಆಯಿತು. ಅವಳು ಸ್ವಲ್ಪ ಹಿಜರಿಯುತ್ತಲೆ ಕದವನ್ನು ತೆರೆದಳು. ಆಶ್ಚರ್ಯವೆಂಬಂತೆ ಜಯಂತ್ ಅಲ್ಲಿ ನಿಂತಿದ್ದ. ಬಾಯಲ್ಲಿದ್ದ ಬ್ರೆಡ್ಡಿನ ತುಂಡನ್ನು ನುಂಗಿ ಮುಗುಳ್ನಗುವಷ್ಟರಲ್ಲಿ ಅವಳ ನಗುವಿಗಾಗಿ ಕಾಯದೇ ಒಳಗಡೆ ಬಂದ.
ಅಂದು ಮದ್ಯಾಹ್ಮ ನಡೆದ ಘಟನೆಯನ್ನು ಆತನಿಗೆ ಹೇಳಬೇಕೆಂದುಕೊಳ್ಳುವಷ್ಟರಲ್ಲಿ ಅಡುಗೆ ಮನೆಗೆ ನುಗ್ಗಿದ ಜಯಂತ್ ಕಾಫಿ ಸಿದ್ದಪಡಿಸಿಕೊಂಡ.
"ಊಟ ಆಯ್ತಾ?"
"ಆಯ್ತು", ಕಣ್ಣು ಮಾತ್ರ ಮೊಬೈಲ್ ಮೇಲೆ ಇತ್ತು.
"ನಾನು ನಿಮ್ ಹತ್ರ ಮಾತಾಡ್ಬೇಕು."
"ನೀನು ಈಗಾಗಲೇ ನನ್ನೊಂದಿಗೆ ಮಾತಾಡ್ತಾ ಇದ್ದೀಯಾ ಅಂದ್ಕೊಳ್ತೀನಿ", ಈಗಲೂ ಕೂಡ ಮೊಬೈಲ್ ಮೇಲೆ ಧ್ಯಾನ.
"ಈ ರೀತಿಯಾಗಿ ಅಲ್ಲ. ಸ್ವಲ್ಪ ಸೀರಿಯಸ್ ಮ್ಯಾಟರ್." ಮೊಬೈಲ್ ತೆಗೆದು ಪಕ್ಕಕ್ಕೆ ಇತ್ತು, ತಾನು ಅವಳ ಮಾತನ್ನು ಕೇಳಿಸಿಕೊಳ್ಳಲು ರೆಡಿ ಎಂಬಂತೆ ಕೈಕಟ್ಟಿ ಕುಳಿತು ಅವಳತ್ತಲೆ ನೋಡಿದ.
"ಕಳೆದ ಕೆಲವು ದಿನಗಳಿಂದ ಯಾರೋ ನಮ್ ಮನೆ ಒಳಗೆ ಯಾರೋ ಬರ್ತಾ ಇದ್ದಾರೆ ಅನ್ಸ್ತಾ ಇದೆ. ನನ್ನನ್ನ ಅವನು ಫಾಲೋ ಮಾಡ್ತ ಇದಾನೆ ಅಂತ ಕಾಣುತ್ತೆ. ನಾನು ಇಲ್ಲೆ ಇದ್ದಾಗ್ಲೇ ಯಾರೋ ಓಡಾಡ್ತಾ ಇದ್ದರೆ ಅನ್ನೋ ತರ ಆಗ್ತಿದೆ."
"ನಿನ್ನ ಇಮ್ಯಾಜಿನೇಶನ್ ನ ಸ್ಟಾಪ್ ಮಾಡು. ಎಲ್ಲವೂ ಸರಿ ಆಗುತ್ತೆ."
"ಇಲ್ಲ. ಇಲ್ಲ. ನನಗೆ ಸ್ವಲ್ಪ ಮಟ್ಟಿಗೆ ಖಚಿತ ಆಗಿದೆ. ಹಾಗೆ ಸ್ವಲ್ಪ ಕನ್ಫೂಸ್ ಕೂಡ ಆಗಿದೆ. ಡೈನಿಂಗ್ ಟೇಬಲ್ ಮೇಲೆ ತಿಂಡಿ ಇಟ್ಟಿದ್ದು ನನಗೆ ಚೆನ್ನಾಗಿ ನೆನ್ಪಿದೆ. ಆದ್ರೆ ಮದ್ಯಾಹ್ನ ನೋಡ್ದಾಗ ಅಲ್ಲಿ ಇರ್ಲಿಲ್ಲ. ಯಾರೋ ತಿಂದು ಹೋಗಿದ್ರು."
"ಓಹೋ. ಯಾರೋ ನಿನ್ನ ತಿಂಡಿಯನ್ನ ಕದ್ದು ತಿನ್ನಲಿಕ್ಕೆ ಮನೆಗೆ ಹೊಕ್ಕು ನಿನ್ನ ಫಾಲೋ ಮಾಡ್ತಾರೆ? ಎಲ್ಲೋ ಹುಚ್ಚು ನಿನಗೆ."
"ಜಯಂತ್. ಪ್ಲೀಸ್. ಆಮ್ ಸೀರಿಯಸ್. ನನ್ನ ಸರ ಕಳ್ಳತನ ಕೂಡ ಹೀಗೆ ಆಗಿದ್ದು."
"ನೋಡು.. ನೀನೇ ಕಲ್ಪನೆ ಮಾಡಿಕೊಳ್ತಾ ಇರೋದು. ಎಲ್ಲ ಅಸಂಪ್ಶನ್ಸ್. ಅದೇ ಪ್ರಾಬ್ಲಮ್."
"ಜಯಂತ್.. ಯಾಕೆ ನನ್ನ ಅರ್ಥ ಮಾಡ್ಕೊಳ್ತಾ ಇಲ್ಲ. ನಾನು ಇಷ್ಟು ಸೀರಿಯಸ್ ವಿಷ್ಯ ಹೇಳ್ತ ಇದೀನಿ. ನೀವು ಹೀಗೆ ನನ್ನೇ ದೂಷಿಸ್ತ ಇರೋದು..", ಮಾತು ಪೂರ್ಣಗೊಳಿಸುವ ಮೊದಲೇ ಅಳತೊಡಗಿದಳು.
"ಹಾ.. ನನ್ನ ದೂಷೀಸ್ಬೇಡಿ. ನನ್ನ ಬೈಯ್ಬೇಡಿ. ನನಗೆ ನೋವು ಮಾಡ್ಬೇಡಿ. ಯಾವಾಗ್ಲೂ 'ನಾನು, ನನಗೆ' ಅಷ್ಟೇ ತಾನೇ?”, ಎತ್ತರಿಸಿದ ದ್ವನಿಯಲ್ಲಿ ಕೇಳಿದ.
ಕಣ್ಣೀರು ಅವಳ ಕೆನ್ನೆಯ ಮೇಲೆ ಓಡಿತು. ಜಯಂತ್ ಮುಂದುವರೆಸಿದ, "ನನ್ನ ಸುತ್ತಲೂ ಆಗ್ತಾ ಇರೋದೆಲ್ಲಾ ನನಗೆ ಖುಷಿ ಕೊಡ್ತಾ ಇರೋ ಹಾಗೆ ಆಡ್ತೀಯಾ. ನಿನ್ನ ಇಮ್ಯಾಜಿನೇಶನ್ ನಿಲ್ಸಿ ಊಟ ಮಾಡು. ಬೇಡ ಅಂತಾದ್ರೆ ಹೋಗಿ ಮಲಗು.", ಆರ್ಡರ್ ಮಾಡಿದವಂತೆ ಹೇಳಿ ಮೆಟ್ಟಿಲು ಹತ್ತಿ ತನ್ನ ರೂಮಿನೆಡೆಗೆ ದಾಪುಗಾಲಿಟ್ಟ.
ಸಂಧ್ಯಾ ಅಸಹಾಯಕಳಾಗಿ ಅಳುತ್ತಾ ನಿಂತಳು. ಅವನ ಮೇಲೆ ಕೋಪ ಬಂದಿತ್ತು. ಅವನಿಗೆ ಸಿಟ್ಟು ಬರಿಸಿದ ತನ್ನ ನಡೆಗೆ ತನ್ನ ಮೇಲೆ ತಾನು ಬೇಸರಗೊಂಡಳು. ಮುಖ ಮುಚ್ಚಿಕೊಂಡು ಸೋಫಾದ ಮೇಲೆ ಕುಳಿತು ಅಳುತಿದ್ದಳು. ನಿದ್ದೆ ಅವಳನ್ನು ನಿಧಾನವಾಗಿ ಆವರಿಸಿತು.
ರಾತ್ರಿ ಏನೋ ಶಬ್ದವಾಗಿ ಜಯಂತ್ ಎಚ್ಚರಗೊಂಡ. ಕುರ್ಚಿಯನ್ನು ಎಳೆದ ಶಬ್ದ..! ಅದು ಎಲ್ಲಿಂದ ಬಂತು ಎಂದು ತಿಳಿಯಲಿಲ್ಲ. "ಹಾ. ಮತ್ತೆ ಇದು ಆಗಲ್ಲ" ಎಂದು ತಲೆಗೆ ಕೈಯಾನಿಸಿ ಮಲಗಿದ. ಮತ್ತೆ ಕಿವಿಗೆ ಬಿತ್ತು ಶಬ್ದ ಮತ್ತೊಮ್ಮೆ...! ಈ ಬಾರಿ ಬಾಗಿಲಿನ ಚಿಲಕ ಸರಿಸಿದ ಸದ್ದು. ಈಗ ಮಾತ್ರ ಜಯಂತ್ ಅದುರಿಹೋದ.
ಕೂಡಲೇ ಕೆಳಗೆ ಇದ್ದ ಹಾಲ್ ಗೆ ಓಡಿ ಹೋದ. ಎಲ್ಲವೂ ಶಾಂತವಾಗಿ, ಸಹಜವಾಗಿತ್ತು. ಸಂಧ್ಯಾ ಸೋಫಾದ ಮೇಲೆ ನಿದ್ರಿಸುತ್ತಿದ್ದಳು.
ಸಮಾಧಾನವಾಗಿ ರೂಮಿಗೆ ಹಿಂದಿರುಗಬೇಕೆಂದುಕೊಳ್ಳುತ್ತಿರಬೇಕಾದರೆ ಒಂದು ನೆರಳು ಮನೆಯಿಂದ ಹೊರಗೆ ಓಡಿದಂತಾಯಿತು. ಆತನ ದಿಗ್ಬ್ರಮೆ ಉಲ್ಬಣಗೊಳ್ಳುವಂತೆ ಮನೆಯ ಮುಂದಿನ ಬಾಗಿಲಿನ ಲಾಕ್ ತೆರೆದಿತ್ತು. ಯಾರೋ ಈಗ ತಾನೇ ಗಟ್ಟಿಯಾಗಿ ಎಳೆದಂತೆ ಬಾಗಿಲು ಅಲುಗಾಡುತ್ತಿತ್ತು. ಬಾಗಿಲಿನ ಸನಿಹಕ್ಕೆ ಹೋಗಿ ಹೊರಕ್ಕೆ ಇಣುಕಿ ನೋಡಿದ. ಅಪಾರ್ಟ್‌ಮೆಂಟಿನ ವರಾಂಡದ ಲೈಟ್ ಎಲ್ಲವೂ ಉರಿಯುತ್ತಿತ್ತು. ಆ ದಾರಿ ಸಹಜವಾಗಿಯೇ ತೋರಿತು. ಹಠಾತ್ ಚಲನವಲನದ ಸೂಚನೆಗಳು ಕಂಡುಬರಲಿಲ್ಲ.
ಉಫ್ ಎಂದುಕೊಂಡು ಇನ್ನೇನು ಮನೆಯೊಳಕ್ಕೆ ಹೋಗಬೇಕು ಎಂದುಕೊಳ್ಳುವಷ್ಟರಲ್ಲಿ ಒಂದು ಕಪ್ಪು ಆಕೃತಿ ಮನೆಯೊಳಗೆ ನಿಂತಿರುವುದು ಕಂಡಿತು. ಅದೂ ಕೂಡ ಹೊರಗಿನಿಂದ ಲಾಕ್ ಆಗಿದ್ದ ಮಮತಾ ಅವರ ಮನೆಯ ಒಳಗೆ…!!!. ಇವನತ್ತಲೇ ತಿರುಗತೊಡಗಿದಾಗ ಹತ್ತೇ ಸೆಕೆಂಡುಗಳಲ್ಲಿ ಜಯಂತನ ದೇಹ ಬೆವರಿನಿಂದ ತೊಯ್ದುಹೋಗಿತ್ತು.